ಭೂಕಂಪನ	 - 
 	ಭೂಮಿಯ ಆಳದಲ್ಲಿಯ ಶಿಲೆಗಳ ಸ್ತರಭಂಗದಿಂದ ಅಥವಾ ಜ್ವಾಲಾಮುಖಜ ಬಲಗಳಿಂದ ಭೂಮಿಯ ಮೇಲ್ಮೈಯಲ್ಲಿ ತಲೆದೋರುವ ಕಂಪನ ಅಥವಾ ಚಲನೆ (ಅರ್ತ್‍ಕ್ವೇಕ್). ಹೊರಚಿಪ್ಪಿನಲ್ಲಿ ಕಾಣಿಸಿಕೊಳ್ಳುವ ತೀವ್ರಗತಿಯ ಚಲನೆಗಳಿವು. ಭೂಮಿಯ ಒಳಗೆ ಸುಮಾರು 700 ಕಿಲೊಮೀಟರುಗಳ ಆಳದಲ್ಲಿ ದಿಢೀರನೆ ಉದ್ಭವವಾಗುವ ಪುಟಿತ ಅಲೆಗಳ ಶ್ರೇಣಿ ಇದಕ್ಕೆ ಕಾರಣ. ನೆಲ ಮೇಲಕ್ಕೂ ಕೆಳಕ್ಕೂ ಸರಿಯುವುದು, ಕಟ್ಟಡಗಳ ಕುಸಿತ, ಮರ ಬುಡಮೇಲಾಗುವುದು, ಬೆಟ್ಟಗಳು ತೂಗಿದಂತಾಗಿ ಅವುಗಳ ಅಂಚುಗಳು ತುಂಡಾಗಿ ಕೆಳಕ್ಕೆ ಜಾರಿ, ತಪ್ಪಲಲ್ಲಿರುವ ಗ್ರಾಮಗಳು ನಿರ್ನಾಮವಾಗುವುದು, ನೆಲದ ಅಂತರಾಳದಿಂದ ಗುಡುಗು ಶಬ್ದ ಮೊಳಗುವುದು ಇತ್ಯಾದಿಗಳೆಲ್ಲ ಭೂಕಂಪನದ ಪ್ರಕಟಿತರೂಪಗಳೇ. ಕೆಲವೊಂದು ಭೂಕಂಪನಗಳು ಭಯಾನಕಸ್ವರೂಪದವಾಗಿದ್ದು ಆಗುವ ಪ್ರಾಣಹಾನಿ, ಆಸ್ತಿನಷ್ಟ ಇವುಗಳ ತೀವ್ರತೆ ಬಲು ಅಧಿಕವಾಗಿರುತ್ತವೆ.

	ಎಲ್ಲ ಭೂಕಂಪನಗಳೂ ಭಯಾನಕವಾದವಲ್ಲ. ಭೂಮಿಯ ಮೇಲೆ ಸದಾ ಕಾಲದಲ್ಲಿಯೂ ಯಾವುದಾದರೊಂದೆಡೆ ಭೂಮಿಯ ಕಂಪನ ಇದ್ದೇ ಇರುತ್ತದೆ. ಎಲ್ಲ ಕಂಪನಗಳೂ ಅನುಭವಕ್ಕೆ ಗೋಚರವಲ್ಲ. ಸೂಕ್ಷ್ಮಯಂತ್ರಗಳಿಂದ ಮಾತ್ರ ಈ ಪರಿಣಾಮವನ್ನು ಗುರುತಿಸಲು ಸಾಧ್ಯ. ಬಾವಿ ತೋಡುವಾಗ, ಗಣಿಗಳಲ್ಲಿ ಕಲ್ಲು ಸೀಳಲು ಸಿಡಿಗುಂಡು ಸ್ಫೋಟಿಸುವಾಗ ಉಂಟಾಗುವ ಢಮ್ ಎಂಬ ಶಬ್ದ, ಈ ಶಬ್ದದ ಶೀವ್ರತೆಗೆ ಮನೆಯ ಬಾಗಿಲು ಚಿಲಕಗಳು ಅಲ್ಲಾಡುವುದು, ಬಾಂಬ್ ಸ್ಫೋಟ ಇವೆಲ್ಲ ಭೂಕಂಪನ ಉಂಟುಮಾಡಬಲ್ಲವು.

	ಭೂಕಂಪನವಲಯ: ಕೆಲವೊಂದು ಸಮಯದಲ್ಲಿ ಜ್ವಾಲಾಮುಖಿಯ ಕ್ರಿಯಾ ಚಟುವಟಿಕೆಗಳಿಂದ ಕೂಡಿದ ಚಲನೆಗಳಿರುವ, ಭೂಮಿಯ ಮೇಲ್ಪದರದ ವಲಯ (ಅರ್ತ್‍ಕ್ವೇಕ್ ಜೋóನ್). ಭೂಮಿಯ ಎಲ್ಲ ಭಾಗಗಳೂ ಕಂಪಿಸುವುದಿಲ್ಲ. ಮೇಲಿಂದ ಮೇಲೆ ಕಂಪನಕ್ಕೆ ಒಳಗಾಗುವ ವಲಯವೇ ಬೇರೊಂದಿದೆ. ಇದನ್ನು ಚಿತ್ರ (1)ರಲ್ಲಿ ಚುಕ್ಕಿಗೀಟುಹಾಕಿ ತೋರಿಸಿದೆ. ಇದರಲ್ಲಿ ಸುಮಾರು 30,000 ಭೂಕಂಪನಗಳನ್ನು ಗಣಕದ ನೆರವಿನಿಂದ ಗುರುತಿಸಿದೆ. ವಿಶೇಷವಾಗಿ ಹಾನಿ ಉಂಟುಮಾಡಿರುವ ಭೂಕಂಪನಗಳೆಲ್ಲ ಈ ವಲಯಕ್ಕೆ ಸೀಮಿತವಾಗಿರುತ್ತವೆ.

	ಭೂಮಿ ಪ್ರಾಚೀನದಲ್ಲಿ ಸೂರ್ಯನ ಅಂಶವಾಗಿದ್ದು, ಆ ಆಕಾಶಕಾಯದಿಂದ ಬೇರ್ಪಟ್ಟು, ಆರಿ, ಗಟ್ಟಿಗೊಂಡ ಗ್ರಹ ಎಂಬುದು ಒಂದು ಮತ. ಭೂಮಿಯ ಹೊರಚಿಪ್ಪು ಮಾತ್ರ ಘನೀಭವಿಸಿ ಗಡುಸಾಗಿದೆ. ಭೂಮಿಯ ಬಲು ಆಳದಲ್ಲಿ ಭೂವಸ್ತು ಕುದಿಯುತ್ತಿರುವ ಪಾಕರೂಪದಲ್ಲಿದೆ. ದ್ರವರೂಪದ, ಕುದಿಯುತ್ತಿರುವ ಪಾಕದ ಮೇಲುಭಾಗ ಕ್ರಮೇಣ ಆರಿ ಹೆಪ್ಪುಗಟ್ಟಿ, ಹೆಪ್ಪುಗಳು ದೂರ ಸರಿದು ಒಂದಕ್ಕೊಂದು ಢಿಕ್ಕಿ ಹೊಡೆಯುತ್ತಿರುತ್ತವೆ. ಮೇಲಿನ ಗೋಚರ ಭೂಖಂಡ ಭಾಗಗಳು ಶಿಲಾಪಾಕದ ಮೇಲೆ ತೇಲುತ್ತಿವೆ ಮತ್ತು ನಿಧಾನವಾಗಿ ಚಲಿಸುತ್ತಿವೆ ಕೂಡ. ಇವು ಒಂದಕ್ಕೊಂದು ತಗಲಿದಾಗ ಘರ್ಷಣೆ ಏರ್ಪಟ್ಟು ಭೂಮಿ ಕಂಪಿಸುತ್ತದೆ. ಎರಡು ಖಂಡಗಳು ಸಂಧಿಸುವಾಗ ಅವುಗಳ ನಡುವೆ ಸಮುದ್ರದಲ್ಲಿ ಶೇಖರವಾದ ಪದರುಪದರಾದ ವಸ್ತುಗಳೆಲ್ಲ ಮಡಿಕೆಬಿದ್ದು ಪರ್ವತ ಪಂಕ್ತಿಯಾಗಿ ಮೇಲೆದ್ದು ನಿಲ್ಲುತ್ತವೆ. ಇಂಥ ಸಂದರ್ಭದಲ್ಲಿ ಶಿಲೆಗಳೆಲ್ಲ ಮಡಿಕೆಬಿದ್ದು ಬಿಗುವು ಸ್ಥಿತಿಯಲ್ಲಿರುತ್ತವೆ. ಒತ್ತಡ ಹೆಚ್ಚಿದಂತೆ ಬಿಡಿ ಭಾಗಗಳು ಸಿಡಿದು ಒಂದರಮೇಲೊಂದು ಜಾರುವ ಸಂಭವವೂ ಉಂಟು. ಹೀಗೆ ಅತಿಯಾಗಿ ಮಡಿಕೆ ಬಿದ್ದ ಶಿಲೆಗಳನ್ನೂ ಅವುಗಳಲ್ಲಿಯ ಸೀಳುಗಳನ್ನೂ ಆ ಸೀಳುಗಳ ಜಾಡಿನಲ್ಲಿ ಶಿಲಾ ಸಮುದಾಯಗಳು ಜರಗುವುದನ್ನೂ ಹಿಮಾಲಯದಂಥ ಪರ್ವತಶ್ರೇಣಿಗಳಲ್ಲಿ ಕಾಣಬಹುದು. ಮಡಿಕೆಬಿದ್ದ ಶಿಲೆಗಳ ವಿನ್ಯಾಸವನ್ನು ಚಿತ್ರ (2)ರಲ್ಲಿ ಕಾಣಿಸಿದೆ.

	ಮಡಿಕೆಬಿದ್ದು ನಿಂತಿರುವ ಶಿಲೆಗಳು ಹೆದೆಯೇರಿಸಿದ ಬಿಲ್ಲಿನಕಮಾನಿಗೆ ಇರುವ ಬಿಗುವು ಸ್ಥಿತಿಯಂತೆಯೇ ಇರುತ್ತದೆ. ಯಾವುದೇ ವಸ್ತುವನ್ನಾಗಲಿ ಜಗ್ಗಿಸಿದರೆ ಅದು ಬಗ್ಗುತ್ತ ಹೋಗುತ್ತದೆ. ಜಗ್ಗಿಸುವ ಒತ್ತಡ ಹೆಚ್ಚಾದಾಗ ಕೊನೆಗೆ ಆ ವಸ್ತು ಇನ್ನು ಬಾಗದೆ ಎರಡು ತುಂಡಾಗುತ್ತದೆ. ತುಂಡಾದ ಭಾಗಗಳು ಒತ್ತಡÀದ ಸಲುವಾಗಿ ಪಟಾರನೆ ಸಿಡಿದೇಳುತ್ತವೆ. ಕಲ್ಲುಪದರಗಳೂ ಇದೇ ರೀತಿ ತೋರಿಕೆಗೆ ಗಡುಸಾಗಿ ಕಂಡರೂ ಒತ್ತಡಕ್ಕೆ ಹೆಚ್ಚುಕಾಲ ಈಡಾದಲ್ಲಿ ಅವೂ ಬಗುತ್ತ ಹೋಗುತ್ತವೆ. ಆದರೆ ಈ ರೀತಿ ಮಡಿಕೆಬೀಳುವುದಕ್ಕೂ ಒಂದು ಪರಿಮಿತಿ ಉಂಟು. ಒತ್ತಡ ಹೆಚ್ಚಾಗುತ್ತ ಹೋಗಿ ಇನ್ನು ಬಾಗುವಿಕೆ ಅಸಾಧ್ಯವಾದಾಗ ಕಲ್ಲುಪದರಗಳು ಸಿಡಿದೇಳುತ್ತವೆ. ಭೂಮಿಯ ಮೇಲೆ ಪದರ ಪದರವಾಗಿ ಶೇಖರಗೊಂಡ ಶಿಲಾಪದರ ಮಡಿಕೆಬೀಳುವುದನ್ನೂ ಭೂಬಲಗಳ ದೆಸೆಯಿಂದ ಈ ಶಿಲಾಪದರಗಳು ಬಗ್ಗುವುದನ್ನೂ ಒತ್ತಡ ಹೆಚ್ಚಿದಂತೆ ಇನ್ನೂ ಹೆಚ್ಚು ಮಡಿಕೆ ಬೀಳಲಾರದೆ ಎರಡು ಭಾಗಗಳಾಗಿ ಛಿದ್ರಗೊಂಡು ತುಂಡಾದ ಭಾಗಗಳು ಜಾರುವುದನ್ನೂ ಚಿತ್ರ (2)ರಲ್ಲಿ ತೋರಿಸಿದೆ. ಹಾಗೆ ತುಂಡಾದ ಭಾಗಗಳು ಸಿಡಿದು ಜಾರುವಾಗ ಉಂಟಾಗುವ ಶಕ್ತಿ ಅಲೆಯಲೆಯಾಗಿ ಹೊರಟು ಭೂಮಿಯನ್ನು ಅಲ್ಲಾಡಿಸಿ, ಎದುರಾದದ್ದೆಲ್ಲವನ್ನು ನೆಲಸಮ ಮಾಡಿಬಿಡುತ್ತ ಕಂಪನದ ವಲಯದಲ್ಲಿ ನಿಂತಿರುವ ಕಟ್ಟಡಗಳು ನಿರ್ನಾಮವಾಗುತ್ತವೆ.

	ಪರ್ವತಶ್ರೇಣಿಗಳು ಹುಟ್ಟಿಕೊಳ್ಳುವುದಕ್ಕೆ ಶಿಲಾಪದರಗಳು ಅತಿಯಾಗಿ ಮಡಿಕೆ ಬಿದ್ದು ಮೇಲೆದ್ದು ನಿಲ್ಲುವುದೇ ಕಾರಣ. ಭಾರತದ ಹಿಮಾಲಯ ಪರ್ವತಶೇಣಿಯ ಶಿಲೆಗಳನ್ನು ಪರಿಶೀಲಿಸಿದಾಗ ಅವು ಅತಿಯಾಗಿ ಮಡಿಕೆಬಿದ್ದಿರುವುದು ಗೊತ್ತಾಗುತ್ತದೆ. ಹಿಮಾಲಯ ಪರ್ವತದ ಮುಂಬದಿಯಲ್ಲಿ ಈ ಬಗೆಯ ಸೀಳುಗಳಿರುವುದರಿಂದ ಅಲ್ಲಿಯ ಶಿಲೆಗಳು ಮತ್ತೆ ಮತ್ತೆ ಜಾರುವ ಸಂಭವ ಹೆಚ್ಚು. ಪ್ರತಿಯೊಂದು ಸಲ ಶಿಲೆ ಸರಿದಾಗಲೂ ಭೂಕಂಪನವಾಗುತ್ತದೆ. ಇದೇ ಅಲ್ಲದೆ ಹಿಮಾಲಯ ಪರ್ವತದ ಮುಂದಿರುವ ಪ್ರದೇಶವೆಲ್ಲ ಗಂಗಾ, ಸಿಂಧು, ಬ್ರಹ್ಮಪುತ್ರ ನದಿಗಳು ತಂದು ಸುರಿದ ಹಸಿಮೆಕ್ಕಲು ಮಣ್ಣಿನಿಂದ ಕೂಡಿದ ಬಯಲು. ಈ ಪ್ರದೇಶದಲ್ಲಿ ಭೂಮಿ ಸ್ವಲ್ಪ ಕಂಪಿಸಿದರೂ ಅಲ್ಲಿಯ ಕಟ್ಟಡಗಳ ಮೇಲೆ ಅದರ ಪರಿಣಾಮ ಬಹಳ. ದಕ್ಷಿಣ ಭಾರತದ ನೆಲ ಬಲು ಗಡಸು. ಈ ಪ್ರದೇಶದಲ್ಲಿಯ ಕಟ್ಟಡಗಳು ಬಂಡೆಯಮೇಲೆ ನಿರ್ಮಾಣವಾದಂಥವು. ಇದರಿಂದ ಭೂಮಿ ಎಷ್ತೇ ತೀವ್ರವಾಗಿ ಕಂಪಿಸಿದರೂ ಕಟ್ಟಡಗಳಿಗೆ ಹೆಚ್ಚಿನ ಹಾನಿಯೇನೂ ಆಗದು.

	ಭೂಕಂಪನ ಕೇಂದ್ರ ಅದನ್ನು ಗುರುತಿಸುವ ಬಗೆ: ಕೊಳದ ಮಧ್ಯೆ ಕಲ್ಲನ್ನು ಎಸೆದರೆ, ಅದು ಬಿದ್ದ ಸ್ಥಳದಿಂದ ಅಲೆಗಳು ಚಕ್ರಾಕಾರವಾಗಿ ಹೊರಹೊರಡುತ್ತವೆ. ಕಲ್ಲು ಬಿದ್ದ ಸ್ಥಳ ಅಥವಾ ಕೇಂದ್ರದ ಹತ್ತಿರ ಅಲೆಗಳ ತೊನೆತ ಹೆಚ್ಚು. ಕೇಂದ್ರದಿಂದ ದೂರ ಸರಿದಂತೆ ಅದು ಕಡಿಮೆಯಾಗುತ್ತ ಕೊನೆಗೆ ಅಲೆಗಳು ಕಾಣದೆಯೇ ಹೋಗುತ್ತವೆ. ಭೂಕಂಪನ ಅಲೆಗಳ ಸ್ವರೂಪವೂ ಇದೇಬಗೆಯದು. ಯಾವ ಪ್ರದೇಶದಲ್ಲಿ ಶಿಲೆಗಳು ಸಿಡಿದು ಬೀಳುತ್ತವೋ ಆ ಪ್ರದೇಶದ ಬಳಿ ಕಂಪನ ಹೆಚ್ಚು. ಅಲ್ಲಿಂದ ದೂರಸರಿದಂತೆ ಕಂಪನದ ವೇಗಕಡಿಮೆಯಾಗುತ್ತದೆ. ಚಿತ್ರ (3)ರಲ್ಲಿ ತೋರಿಸಿರುವಂತೆ o ಸ್ಥಳ ಭೂಮಿಯ ಆಳಕ್ಕೆ ಇಪ್ಪತ್ತೈದು ಕಿಲೊಮೀಟರುಗಳಷ್ಟು ಕೆಳಗೆ ಇದೆಯೆಂದೂ ಆ ಭಾಗದಲ್ಲಿ ಶಿಲೆ ಸಿಡಿಯತ್ತೆಂದೂ ಇಟ್ಟುಕೊಳ್ಳೋಣ. ಈಗ o ಭೂಕಂಪನದ ಕೇಂದ್ರಬಿಂದುವಾಯಿತು. ಭೂಮಿಯ ಹೊರ ಮೈಯಲ್ಲಿ o ಗೆ ತೀರ ಸಮೀಪದ ಪ್ರದೇಶವೆಂದರೆ ಠಿ. ಇದಕ್ಕೆ ಅಧಿಕೇಂದ್ರ (ಎಪಿ ಸೆಂಟರ್) ಎಂದು ಹೆಸರು. ಠಿ ಬಿಂದುವಿನ ಸಮೀಪವೇ ಭೂಕಂಪನದ ತೀವ್ರತೆ ಹೆಚ್ಚು. ಠಿ ಯಿಂದ ದೂರ ಸರಿದಂತೆ ಭೂಕಂಪನದ ತೀವ್ರತೆ ಕೂಡ ಕಡಿಮೆಯಾಗುತ್ತ ಹೋಗುತ್ತದೆ. ಅನಾಹುತ ಯಾವ ಪ್ರದೇಶದಲ್ಲಿ ಹೆಚ್ಚು ಎನ್ನುವುದನ್ನು ಆ ಸುತ್ತಲಿನ ಪ್ರದೇಶವನ್ನು ಪರೀಕ್ಷಿಸಿಯೇ ನಿರ್ಧರಿಸಬೇಕು.

	ಕಂಪನ ಬಗೆಗಳು: ಭೂಕಂಪನಗಳ ತೀವ್ರತೆ ಅನುಸರಿಸಿ ಅವನ್ನು 10 ಬಗೆಗಳಲ್ಲಿ ವಿಂಗಡಿಸಲಾಗಿದೆ.
	1 ಅತಿಸೂಕ್ಷ್ಮ ಕಂಪನ: ಇದನ್ನು ನಾಜೂಕಿನ ಸೂಕ್ಷ್ಮ ಭೂಕಂಪನಮಾಪಕಗಳು ಮಾತ್ರ ಗುರುತಿಸಬಲ್ಲವು.
	2 ಅತ್ಯಂತ ದುರ್ಬಲ ಕಂಪನ: ಇದನ್ನು ಎಲ್ಲ ಬಗೆಯ ಭೂಕಂಪನಮಾಪಕಗಳೂ ಗುರುತಿಸಬಲ್ಲವು. ವಿಶ್ರಾಂತಿ ತೆಗೆದುಕೂಳ್ಳುವ ಕೆಲವರ ಗಮನಕ್ಕೂ ಈ ಬಗೆಯ ಕಂಪನಗಳು ಬರುವುದುಂಟು.
	3 ಅತಿ ದುರ್ಬಲ ಕಂಪನ: ವಿಶ್ರಾಂತಿ ತೆಗೆದುಕೂಳ್ಳುತ್ತಿರುವ ಬಹುಪಾಲು ಮಂದಿಯ ಅನುಭವಕ್ಕೆ ಬರುವಂಥದು.
	4 ದುರ್ಬಲಕಂಪನ: ಓಡಾಡುತ್ತಿರುವವರಿಗೂ ಈ ಬಗೆಯ ಕಂಪನದ ಅರಿವಾಗುತ್ತದೆ. ನೇತುಬಿಟ್ಟಿರುವ ವಸ್ತುಗಳು ತೂಗುತ್ತವೆ. ಕದಗಳು ಬಡಿದುಕೊಳ್ಳುತ್ತವೆ. ಮನೆಯಸೂರು ಬಿರುಕು ಬಿಡಬಹುದು.
	5 ಲಘು ತೀವ್ರತೆಯ ಕಂಪನ: ಇದು ಎಲ್ಲರ ಅನು ಭವಕ್ಕೂ ಬರುವಂಥದು. ಕುರ್ಚಿ ಮೇಜುಗಳು ಅಲುಗಾಡುತ್ತವೆ. ತೂಗುಗಂಟೆಗಳು ತಾವಾಗಿಯೇ ಶಬ್ದಮಾಡುತ್ತವೆ.
	6 ಅಧಿಕ ತೀವ್ರತೆಯ ಕಂಪನ: ನಿದ್ರೆ ಮಾಡುವವರು ಎಚ್ಚರಗೊಳ್ಳುತ್ತಾರೆ ಗಂಟೆಗಳು ತಮಗೆ ತಾವೇ ಬಡಿದುಕೊಳ್ಳುತ್ತವೆ. ತೂಗುದೀಪಗಳು ಅತ್ತಲಿಂದಿತ್ತ ತೂಗಾಡುತ್ತವೆ. ಗಡಿಯಾರಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಗಿಡಮರಗಳು ಹೊಯ್ದಾಡುತ್ತವೆ. ಜನ ಭೀತರಾಗಿ ಮನೆಬಿಟ್ಟು ಹೊರಗೆ ಓಡಿಬರುತ್ತಾರೆ.
	7 ತೀವ್ರ ಕಂಪನ: ಪೇರಿಸಿಟ್ಟ ಸಾಮಾನುಗಳು ಕೆಳಗೆ ಉರುಳುತ್ತವೆ. ಗೋಡೆಗಿಲಾವುಗಾರೆ ಕಳಚಿಬೀಳುತ್ತದೆ. ಚರ್ಚಿನ ಎತ್ತರ ಗೋಪುರ ಗಂಟೆಗಳು ತಂತಾವೇ ಬಡಿದುಕೊಳ್ಳುತ್ತವೆ. ಎಲ್ಲರೂ ಭಯಗ್ರಸ್ತರಾಗುತ್ತಾರೆ.
	8 ಅತಿ ತೀವ್ರತೆಯ ಕಂಪನ: ಚಿಮಿಣಿಗಳು ಉರುಳುತ್ತವೆ ಮನೆಯ ಗೋಡೆಗಳು ಬಿರುಕು ಬಿಡುತ್ತವೆ. ಬಾವಿಗಳಲ್ಲಿಯ ನೀರಿನ ಮಟ್ಟದಲ್ಲಿ ವ್ಯತ್ಯಾಸ ಕಾಣಬರುತ್ತದೆ.
	9 ಅತ್ಯಂತ ತೀವ್ರತೆಯ ಕಂಪನ: ಬಲು ಹಾನಿಕರ, ಮನೆಗಳು ಅತಿಯಾಗಿಯೋ ಸ್ವಲ್ವವಾಗಿಯೋ ಕುಸಿದು ಬಿಳುತ್ತವೆ. ಮೇಲು ಕಟ್ಟಡ ಅಡಿಪಾಯದಿಂದ ಬೇರಾಗುತ್ತದೆ. ನೆಲ ಬಿರಿಯುತ್ತದೆ.
	10 ಅತ್ಯಧಿಕ ತೀವ್ರತೆಯ ಕಂಪನ: ವಿಪತ್ಪರಂಪರೆಯಿಂದ ಎಲ್ಲ ಕಟ್ಟಡಗಳೂ ನೆಲಸಮವಾಗುತ್ತವೆ. ನೆಲ ಬಾಯಿಬಿಟ್ಟು ಬಿರುಕುಗಳು ಹುಟ್ಟುತ್ತವೆ. ಬೆಟ್ಟದ ಪಕ್ಕಗಳು ಜರಗಿ ಕೆಳಗುರುಳುತ್ತವೆ.

	ಸಮಕಂಪನ ರೇಖೆಗಳು: ಭೂಕಂಪನವಾದಾಗ ಆ ಸ್ಥಳದ ಸಾರ್ವಜನಿಕರಿಂದ, ನಿಗದಿ ಪಡಿಸಿದ ನಮೂನೆಪತ್ರದಲ್ಲಿ ಮಾಹಿತಿಗಳನ್ನು ಸಂಗ್ರಹಿಸಿ ಅವಕ್ಕೆ ಅನುಗುಣವಾಗಿ ಭೂಕಂಪನಗಳು ವಿಶ್ಲೇಷಣೆ ನಡೆಸುವುದಿದೆ. ಈ ನಮೊನೆಗಳಲ್ಲಿ ಬಂದ ವರದಿಗಳೆಲ್ಲವನ್ನೂ ಸಂಗ್ರಹಿಸಿ ಅವನ್ನು ಈ ಮೊದಲು ತಿಳಿಸಿದಂತೆ ಹತ್ತು ವರ್ಗಗಳಾಗಿ ವಿಂಗಡಿಸುತ್ತಾರೆ. ಸಜಾತೀಯ ಸಮಭೂಕಾಂತೀಯ ವಿಚಲನ ರೇಖೆಗÀಳನ್ನು ವಿಂಗಡಿಸಿ ಸಮಕಂಪನ ರೇಖೆಗಳನ್ನು (ಐಸೊಸೀಸ್ಮಲ್ ಲೈನ್ಸ್) ನಕ್ಷೆಯ ಮೇಲೆ ಗುರುತಿಸುತ್ತಾರೆ. ಬಿಹಾರದಲ್ಲಿ 1934ರಲ್ಲಿ ತಲೆದೋರಿದ ಭೊಕಂಪನದ ಸಮಕಂಪನರೇಖೆಗಳನ್ನು ಚಿತ್ರ (4)ರಲ್ಲಿ ಕಾಣಿಸಿದೆ. ಅತ್ಯಂತ ದುಷ್ಪರಿಣಾಮಕ್ಕೆ ಒಳಗಾದ ಪ್ರದೇಶವನ್ನು ತೀರ ಒಳಗಿರುವ ರೇಖೆ ಗುರುತಿಸುತ್ತದೆ. ಈ ಪ್ರದೇಶದಲ್ಲಿ ಒಂದು ಕಟ್ಟಡವೂ ನೆಟ್ಟಗೆ ಉಳಿಯದು. ಇಲ್ಲಿಂದ ದೂರ ಸರಿದಂತೆ ಸಮಕಂಪನರೇಖೆ ಗುರುತಿಸುವ ಪ್ರದೇಶವೂ ವಿಶಾಲವಾಗುತ್ತ ಹೋಗುತ್ತದೆ. ಹಿಂದಿನ ಕಾಲದಲ್ಲಿ ಭೂಕಂಪನದ ಕೇಂದ್ರಗಳನ್ನು ಗುರುತಿಸಲು ಇಂಥ ಕ್ರಮ ಅನುಸರಿಸುತ್ತಿದ್ದರು. ವಿಜ್ಞಾನದ ಪ್ರಗತಿ ಹೆಚ್ಚಿದಂತೆಲ್ಲ ತಂತ್ರಕೌಶಲವೂ ಹೆಚ್ಚಿ ಈಗ ಅತಿಸೂಕ್ಷ್ಮವೂ ನಾಜೂಕೂ ಆದ ಭೂಕಂಪನ ಮಾಪನ ಯಂತ್ರಗಳು ಬಳಕೆಗೆ ಬಂದಿವೆ.

	ಭೂಕಂಪನಮಾಪಕ: ಭೂಕಂಪನವನ್ನು ಪತ್ತೆಹಚ್ಚುವ ಉಪಕರಣ (ಸೇಸ್ಮೊ ಮೀಟರ್). ಇದರ ಮುಖ್ಯ ಭಾಗಗಳು ಹೀಗಿವೆ (ಚಿತ್ರ 5). ಇದರಲ್ಲಿ ಇಇ ಕಾಂಕ್ರೀಟ್ ಕಂಬ. ಇದನ್ನು ಭದ್ರವಾಗಿ ಭೂಮಿಯಲ್ಲಿ ಹೂತಿರುತ್ತಾರೆ. ಇದರ ತುದಿಗೆ ತೂಕದ ಗುಂಡನ್ನು (ಠಿ) ಸ್ಪ್ರಿಂಗ್ ಮೂಲಕ ತಗಲಸಿರುತ್ತಾರೆ ಕಂಬಕ್ಕೆ ss

	ಹೊಂದಿಕೊಂಡಂತೆ ಇರುವ ಜಗಲಿಯ ಮೇಲೆ ನಿಧಾನವಾಗಿ ಸುತ್ತುವ ಪೀಪಾಯಿ (ಆ) ಇದೆ. ತೂಕದ ಗುಂಡಿಗೆ ಹೊಂದಿಕೊಂಡಂತೆ ರೇಖಿಸಬಲ್ಲ ಒಂದು ಲೇಖನಿ ಉಂಟು. ಭೂಕಂಪನವಾದಾಗ ಕಂಬಕ್ಕೆ ಹೊಂದಿಕೊಂಡಿರುವ ಜಗಲಿ ಅಲ್ಲಾಡುತ್ತದೆ. ಅದರೊಂದಿಗೆ ಆ ಪೀಪಾಯಿ ಕೂಡ ಅಲುಗಾಡುತ್ತದೆ. ತೂಕದ ಗುಂಡು ಠಿ ಮಾತ್ರ ತನ್ನ ತೂಕದ ಬಲದಿಂದ ಜಡವಾಗಿದ್ದು, ಅಲುಗಾಡದೆ ಸ್ಥಿರವಾಗಿರುತ್ತದೆ. ಇದರ ಫಲವಾಗಿ ತೂಕದ ಗುಂಡಿಗೆ ತಗುಲಿಸಿರುವ ಲೇಖನಿ ತಿರುಗುವ ಪೀಪಾಯಿಯ ಮೇಲೆ ಭೂಕಂಪನದ ಅಲೆಗಳಿಗೆ ಅನುಗುಣವಾಗಿ ಏರು ತಗ್ಗುಗಳನ್ನು ಗುರುತಿಸುತ್ತ ಹೋಗುತ್ತದೆ. ಈ ಬಗೆಯ ಯಂತ್ರದಲ್ಲಿ ಭೂಮಿ ಕೆಳಕ್ಕೂ ಮೇಲಕ್ಕೂ ತೂಗಾಡುವುದನ್ನು ಮಾತ್ರ ಗುರುತಿಸಲು ಸಾಧ್ಯ.

	ವಾಸ್ತವವಾಗಿ ಭೂಕಂಪನಮಾಪಕಗಳಲ್ಲಿ ಭೂಕಂಪನದ ಕಾಲವನ್ನು ನಿರ್ದೇಶಿಸುವ ವಿಶೇಷ ಸಾಧನಗಳು ಕೂಡ ಸೇರಿರುತ್ತವೆ. ತಿರುಗುತ್ತಿರುವ ಪೀಪಾಯಿಯ ಮೇಲೆ ಕಂಪನದ ಕಾಲ ಕೂಡ ರೇಖಿತವಾಗುತ್ತದೆ. ಕಂಪನದ ಪ್ರಾರಂಭ, ಅಂತ್ಯ ಇವೆಲ್ಲವನ್ನೂ ಲೇಖನದಿಂದ ತಿಳಿಯುವುದು ಸಾಧ್ಯ ಉಂಟು.

	ಭೂಕಂಪನಲೇಖ: ಯಾವೊಂದು ಕಂಪನವೂ ಇಲ್ಲದಿದ್ದಾಗ, ಭೂಕಂಪನ ಮಾಪಕದ ಲೇಖನಿ ಅಡ್ಡ ಗೀಟೊಂದನ್ನು ಮಾತ್ರ ಗುರುತಿಸುತ್ತ ಹೋಗುತ್ತದೆ. ಭೂಕಂಪನವಾದಾಗ ಮಾತ್ರ ಲೇಖನಿ ವಿಪರೀತ ಅದಿರಿ ಏರುತಗ್ಗುಗಳನ್ನು ಗುರುತಿಸುತ್ತದೆ. ಪೀಪಾಯಿ ಮೇಲೆ ಗುರುತುಬೀಳುವ ರೇಖೆಗೆ ಭೂಕಂಪನಲೇಖ (ಸೀಸ್ಮೊಗ್ರಫ್) ಎಂದು ಹೆಸರು. ಭೂಕಂಪನಗಳನ್ನು ಗುರುತಿಸಿರುವ ಭೂಕಂಪನಲೇಖದ ನಮೂನೆಯ ಚಿತ್ರ (6) ರಲ್ಲಿ ತೋರಿಸಿದೆ. ಈ ಲೇಖನವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಇದರಲ್ಲಿ P ಎಂದು ಗುರುತುಮಾಡಿರುವುದು ಮೊದಲ ಭಾಗ. ಇಲ್ಲಿಯದು ಮೊದಲನೆಯ ಅಲೆ. ಈ ಅಲೆ ಅತಿ ವೇಗವಾಗಿ ಹೊರಡುವುದರಿಂದ ಮೊತ್ತಮೊದಲ ಗುರುತು ಬೀಳುತ್ತದೆ. ಎರಡನೆಯದು S ಅಥವಾ ನಡುವಣ ಅಲೆ. ಮೂರನೆಯದು ಐ ಅಥವಾ ನೀಳಲೆ. ಈ ಅಲೆಗಳಿಗೊ ಭೂಕಂಪನವಾದ ಪ್ರದೇಶಕ್ಕಿರುವ ದೂರಕ್ಕೂ ಸಂಬಂಧ ಉಂಟು. ಭೂಕಂಪನ ಪ್ರದೇಶ ದೂರವಾದಂತೆ ಈ ಒಂದೊಂದು ಬಗೆಯ ಅಲೆಗಳಿಗೆ ಇರುವ ನಡುವಣ ಅಂತರ ಕೂಡ ಹೆಚ್ಚುತ್ತ ಹೋಗುತ್ತದೆ. ಭೂಕಂಪನವಾದ ಪ್ರದೇಶ ಸುಮಾರು 159 ಕಿಮೀ ಮಾತ್ರ ದೂರದಲ್ಲಿದ್ದರೆ ಈ ಒಂದೊಂದು ಅಲೆಗೂ ನಡುವೆ ಕಾಲದ ವ್ಯತ್ಯಾಸ ಬಹಳಷ್ಟು ಇರುವುದಿಲ್ಲ. ಅದೇ ಸಾವಿರಾರು ಕಿಮೀಗಳ ದೂರದಲ್ಲಿ ಭೂಕಂಪನವಾಗಿದ್ದರೆ, ಈ ಒಂದೊಂದು ಬಗೆಯ ಅಲೆಗೂ ನಡುವೆ ಕಾಲದ ವ್ಯತ್ಯಾಸ ಹೆಚ್ಚು. ಎರಡು ಬಗೆಯ ಅಲೆಗಳ ನಡುವಣ ಕಾಲದ ಅವಧಿ ಗೊತ್ತಾದರೆ ಭೂಕಂಪನದ ದೂರವನ್ನು ಲೆಕ್ಕಹಾಕಿ ಹೇಳಬಹುದು. ಭೂಕಂಪನ ಇಂಥದ್ದೇ ಸ್ಥಳದಲ್ಲಿ ಆಗಿದೆ ಎಂದು ನಿರ್ದೇಶಿಸಬೇಕಾದರೆ ಒಂದು ಭೂಕಂಪನ ಲೇಖದಿಂದ ಸಾಧ್ಯವಿಲ್ಲ. ಎರಡು ಮೂರು ಬೇರೆ ಬೇರೆ ಸ್ಥಳಗಳಲ್ಲಿಯ ಭೂಕಂಪನಲೇಖಗಳು ಅಗತ್ಯ. ಉದಾಹರಣೆಗೆ ಪುಣೆಯಿಂದ ಸುಮಾರು 2415 ಕಿಮೀ ದೂರದಲ್ಲಿ, ಕೊಲ್ಕತ್ತದಿಂದ ಸುಮಾರು 1035 ಕಿಮೀ ದೂರದಲ್ಲಿ, ಕೊಡೈಕಾನಲಿನಿಂದ ಸುಮಾರು 2760 ಕಿಮೀ ದೂರದಲ್ಲಿ ಭೂಕಂಪನವಾಗಿದೆ ಎಂದು ಆಯಾ ಕೇಂದ್ರಗಳಲ್ಲಿ ಭೂಕಂಪನಲೇಖಗಳಿಂದ ಗೊತ್ತಾಗುತ್ತದೆ ಎಂದಿಟ್ಟುಕೊಳ್ಳೋಣ. ಆಗ ಪುಣೆ, ಕೊಲ್ಕತ್ತ, ಕೊಡೈಕಾನಲುಗಳನ್ನು ಕೇಂದ್ರವಾಗಿಟ್ಟುಕೊಂಡು, ಆ ಸ್ಥಳಗಳಿಂದ ಭೂಕಂಪನವಾದ ಸ್ಥಳಕ್ಕಿರುವ ದೂರವನ್ನು ತ್ರಿಜ್ಯವಾಗಿಟ್ಟುಕೊಂಡು ವೃತ್ತಗಳನ್ನು ರಚಿಸಿದರೆ ಇವು ಮೂರೂ ಒಂದು ಬಿಂದುವಿನಲ್ಲಿ ಸಂಧಿಸುತ್ತವೆ. ಈ ಸಂಧಿಸ್ಥಾನವೇ ಭೂಕಂಪನ ಕೇಂದ್ರ. ಅಸ್ಸಾಮ್ ರಾಜ್ಯದಲ್ಲಾದ ಭೂಕಂಪನದ ಕೇಂದ್ರವನ್ನು ಕೊಲ್ಕತ್ತ, ಕೊಡೈಕಾನಲ್ ವೀಕ್ಷಣಮಂದಿರಗಳ ಭೂಕಂಪನಲೇಖಗಳಿಂದ ದೊರೆತ ಆಧಾರದ ಮೇಲೆ ಗುರುತಿಸಿರುವುದನ್ನು ಚಿತ್ರ (8)ರಲ್ಲಿ ಕಾಣಿಸಿದೆ.
ಪ್ರಮುಖ ಭೂಕಂಪನಗಳು

ರಾಷ್ಟ್ರ
ವರ್ಷ

ಭಾರತ

1737(ಕಲ್ಕತ್ತ), 1819 (ಕಚ್), 1819(ಅಸ್ಸಾಮ್), 1897(ಅಸ್ಸಾಮ್), 1905(ಕಾಂಗ್ರಾ), 1916(ನೇಪಾಲ), 1934(ಬಿಹಾರ), 1935(ಅಸ್ಸಾಮ್), 1935(ಕ್ವೆಟ್ಟ),1937 (ಕಲ್ಕತ್ತ), 1950(ಅಸ್ಸಾಮ್), 1967(ಕೊಯ್ನ), 1975(ಹಿಮಾಚಲ ಪ್ರದೇಶ).

ಅಮೇರಿಕ ಸಂ. ಸಂ
1811-12
1906
1964

ಇಟಲಿ
1693
1783
1908
1915

ಇರಾನ್
1775
1957
1962
1963
1968
1978
1981

ಏಕ್ವಡಾರ್
1797
1868
1949

ಚಿಲಿ
1906
1939
1960
1965

ಚೀನ
1057
1290
1556
1920
1932
1964
1975

ಜಪಾನ್
1293
1528
1703
1923
1946
1948

ತುರ್ಕಿ
1268
1822
1939
1946
1953
1971

ಪೆರು
1868
1970

ಪೋರ್ಚುಗಲ್
1531
1775

ಮೆಕ್ಸಿಕೋ
1985

	
ಭೂಕಂಪನಗಳನ್ನು ಮುನ್ನುಡಿಯುವುದು: ಯಾವ ವಲಯದಲ್ಲಿ ಭೂಕಂಪನಗಳು ಸಾಮಾನ್ಯವಾಗಿ ಸಂಭವಿಸುತ್ತವೆ ಎಂಬುದನ್ನು ಹಿಂದಿನ ಭೂಕಂಪನಗಳ ಅನುಭವದಿಂದ ಹೇಳಬಹುದು. ಇದು ಸ್ಥೂಲ ಮುನ್ನುಡಿ ಮಾತ್ರ. ಹಿಮಾಲಯ ಶ್ರೇಣಿಯ ಮುಂದಿರುವ ಜನನಿಬಿಡವಾದ ಸಿಂಧೂ, ಗಂಗಾ ಬ್ರಹ್ಮಪುತ್ರ ನದಿಗಳು ಹರಿದು ತೋಯಿಸುವ ಭೂಮಿಯಲ್ಲಿ ಭೂಕಂಪನಗಳು ಸಾಧ್ಯತೆ ಹೆಚ್ಚು. ಅಲ್ಲಿಯ ಜನ ಅವನ್ನು ತಪ್ಪಿಸಿಕೊಳ್ಳುವಂತೆಯೆ ಇಲ್ಲ.

	ಭೂಕಂಪಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಎರಡು ವಿಧದಲ್ಲಿ ಸಂಶೊಧನೆಗಳು ನಡೆಯುತ್ತಿವೆ. ಭೂಮಿಯ ಮೇಲಿರುವ ಶಿಲಾರಚನೆ ಕುರಿತ ಆಳವಾದ ಅಭ್ಯಾಸ ಒಂದು; ಕಂಪನದ ಅಲೆಗಳ ಲಕ್ಷಣಗಳ ಸೂಕ್ಷ್ಮಜ್ಞಾನ ಇನ್ನೊಂದು. ಇವುಗಳ ಸಹಾಯದಿಂದ ಭೂಕಂಪನವಾಗುವ ಸ್ಥಳ ಮತ್ತು ಕಾಲ ನಿರ್ದೇಶಿಸುವ ಪ್ರಯತ್ನ ನಡೆದಿದೆ. ಚೀನ, ಅಮೆರಿಕಗಳಲ್ಲಿ ನಡೆದಿರುವ ಇಂಥ ಅಧ್ಯಯನದ ಸಲುವಾಗಿ ಭೂಕಂಪನವಾಗುವ ಸ್ಥಳ ಮತ್ತು ಕಾಲಗಳ ಮುನ್ಸೂಚನೆ ಕೊಡುವುದು ಸಾಧ್ಯ ಎಂಬುದು ವೇದ್ಯವಾಗಿದೆ.

	ಭೂಕಂಪನಗಳು ಅನಿವಾರ್ಯ, ಆ ಕಾರಣ, ಭೂಮಿ ಕಂಪಿಸಿದರೂ ಪ್ರಾಣಹಾನಿಯಾಗದಂತೆ, ಕಟ್ಟಡಗಳು ಕುಸಿಯದಂತೆ ಅವನ್ನು ಕಾಪಾಡಿಕೊಳ್ಳುವ ವಿಧಾನಗಳನ್ನು ಗೊತ್ತುಮಾಡಿ ಬಳಕೆಗೆ ತರುವುದೊಂದೇ ಮಾರ್ಗ. ಎಂಥದೇ ಭೂಕಂಪನವಾದರೂ ಅವುಗಳೆದುರು ನಿಲ್ಲಬಲ್ಲ ಕಟ್ಟಡಗಳ ವಿನ್ಯಾಸ, ರಚನೆ ಮುಂತಾದವುಗಳ ಬಗ್ಗೆ ಜಪಾನಿಯರು ವಿಶೇಷ ಪರಿಶ್ರಮ ವಹಿಸಿದ್ದಾರೆ. ಟೋಕಿಯೋ ನಗರದಲ್ಲಿ ಆಗಾಗ್ಗೆ ಉಂಟಾಗುವ ಭೂಕಂಪನದ ಹಾವಳಿಯನ್ನು ತಡೆಯಬಲ್ಲ ಅನೇಕ ಕಟ್ಟಡಗಳಿವೆ. ಭೂಕಂಪನವಾದಾಗ ಅಲ್ಲಿಯ ಹಳೆಯ ಕಟ್ಟಡಗಳು ನೆಲಸಮವಾದರೂ ಹೊಸ ಮಾದರಿಯಲ್ಲಿ ನಿರ್ಮಿಸಿದ ಮನೆಗಳು ಅಪಾಯಕ್ಕೊಳಗಾಗದೆ ನಿಂತಿವೆ. 								
	(ಬಿ.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ